Print

- Daijiworld News

ಮಂಗಳೂರು, ಫೆ.11  : ಕ್ಯಾನೂಟ್‌ ಮಥಾಯಿಸ್‌ ಪಿಲಾರ್‌ ಅವರ ಗ್ಲೋರಿಯಸ್ ಏಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ತುಳು ಚಿತ್ರ 'ಎನ್ನ' ಫೆ.14 ರಂದು ತೆರೆಕಾಣಲಿದೆ.

 ಮಂಗಳವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ವಿಶ್ವನಾಥ್ ಕೋಡಿಕಲ್ ಅವರು, ಎನ್ನ ಚಿತ್ರವು ಫೆ.14 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ರಾಜ್ಯದ ಇತರ ಭಾಗಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಯ ಬಗ್ಗೆ ಇಡೀ ಚಿತ್ರತಂಡ ಉತ್ಸುಕರಾಗಿದ್ದೇವೆ. ಎನ್ನ ಸಿನೆಮಾ ರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಿನಿಮಾದಲ್ಲಿ ಬಹಳಷ್ಟು ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಈ ಚಿತ್ರದಲ್ಲಿ ಒಟ್ಟು 173 ಕಲಾವಿದರು ನಟಿಸಿದ್ಧಾರೆ ಎಂದು ತಿಳಿಸಿದರು.

ಈ ಚಿತ್ರವು ಯಾವುದೇ ಕಟ್ಸ್‌‌ ಇಲ್ಲದೇ ಯು/ಎ ಪ್ರಮಾಣಪತ್ರವನ್ನು ಸ್ವೀಕರಿಸಿದೆ. ಇತ್ತೀಚೆಗೆ ಈ ಚಿತ್ರದ ವಿಡಿಯೋ ಹಾಡಿ ಬಿಡುಗಡೆಯಾಗಿದ್ದು ಯೂಟ್ಯೂಬ್‌‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದಲ್ಲದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಛಾಯಾಗ್ರಹಣ ಮಾಡಿದ್ದು ಈ ಸಿನೆಮಾದ ವಿಶೇಷತೆಯಾಗಿದೆ. ವೈಷ್ಣವಿ ಎಸ್‌‌ ಉಡುಪಿ ಅವರು ಛಾಯಾಗ್ರಹಣ ಮಾಡಿದ್ದು, ಅನುಷ್‌ ಚಂದ್ರ ಸಂಕಲನ ಮಾಡಿದ್ದಾರೆ. ಎನ್ನಾ ಸಿನಿಮಾವು ಒಂದು ವಿಶಿಷ್ಟವಾದ ಕಥೆಯನ್ನು ಹೊಂದಿದೆ ಎಂದು ತಿಳಿಸಿದರು.

ಎನ್ನ ಚಿತ್ರದ ಪ್ರಮುಖ ನಟ ವಿ ಜೆ ವಿನೀತ್ ಮಾತನಾಡಿ, ಈ ಚಿತ್ರವು ಉತ್ತಮವಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಮನರಂಜನೆ ನೀಡುವಂತ ಸಿನಿಮಾವಾಗಿದೆ. ಸಿನಿಮಾದ ಕಥೆ ಹಾಗೂ ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ವಿಶ್ವನಾಥ್ ಹಾಗೂ ಮ್ಯಾಕ್ಸಿಮ್ ಏಂಜೆಲೋರ್ ಅವರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಟಿಸುವುದು ಅದ್ಭುತ ಅನುಭವ ಎಂದು ಹೇಳಿದರು.

ನಿರ್ದೇಶಕ ವಿಶ್ವನಾಥ್ ಕೋಡಿಕಲ್‌ ಅವರೇ ಸಿನಿಮಾಕ್ಕೆ ಕಥೆ ಹಾಗೂ ಚಿತ್ರಕಥೆ ನೀಡಿದ್ದು ಪ್ರಶಾಂತ್‌ ಸಿ ಕೆ ಸಂಭಾಷಣೆ ಬರೆದಿದ್ದಾರೆ. ಸಹ ನಿರ್ದೇಶಕರಾಗಿ ಮ್ಯಾಕ್ಸಿಮ್‌ ಪಿರೇರ ಏಂಜಲೋರ್‌ ಕಾರ್ಯ ನಿರ್ವಹಿಸಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಲಾಲ್‌ ವೆಲೆಂಡಿನ್‌ ಸಲ್ಡಾನ್ಹ ಅವರು ನೀಡಿದ್ದಾರೆ. ಚಿತ್ರವನ್ನು ಮಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನಲ್ಲಿ ಹೆಚ್ಚಿನ ಶೂಟಿಂಗ್ ಮಾಡಲಾಗಿದೆ.

ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿನೀತ್‌ ಕುಮಾರ್‌, ಶೃತಿ ಪೂಜಾರಿ, ಅಶ್ಮಿತ್‌ ರಾಜ್‌, ಪ್ರತೀಕ್‌ ಸನಿಲ್‌‌, ಪ್ರಶಾಂತ್‌ ಸಿ.ಕೆ, ಅತಿಥಿ ಪಾತ್ರದಲ್ಲಿ ಕೋಸ್ಟಲ್‌ವುಡ್‌‌ನ ಪ್ರಸಿದ್ದ ನಾಯಕ ಪೃಥ್ವಿ ಅಂಬರ್‌‌ ಅಭಿನಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಿ ಕೆ ಪ್ರಶಾಂತ್, ನಿರ್ಮಾಪಕ ಕ್ಯಾನುಟ್ ಮಥಿಯಾಸ್, ನಿರ್ದೇಶಕ ವಿಶ್ವನಾಥ್ ಕೊಡಿಕಲ್, ಪ್ರಮುಖ ನಟ ವಿಜೆ ವಿನೀತ್ ಹಾಗೂ ಗ್ಲೋರಿಯಸ್ ಏಂಜೆಲೋರ್ ಪ್ರೊಡಕ್ಷನ್ಸ್‌ನ ಮ್ಯಾಕ್ಸಿಮ್ ಪಿರೇರಾ ಏಂಜೆಲೋರ್ ಉಪಸ್ಥಿತರಿದ್ದರು.